ಏಡಿ: ಜಲವಾಸಿಯಾದ ಈ ಪ್ರಾಣಿ ಅಕಶೇರುಕಗಳ ಗುಂಪಿನ ಸಂಧಿಪದಿ ವಂಶಕ್ಕೆ (ಆತಾರ್ರ್‌ಪೊಡ) ಸೇರಿದೆ. (ಕ್ಯಾಬ್) ವರ್ಗ ಕ್ರಸ್ಟೇಸಿಯ. ಗಣ ಡೆಕಾಪೊಡ. ಉಪಗಣ ಬ್ರಾಕಿಯೂರ. 
ಗಂಡು ಏಡಿಯ ಬೆನ್ನುಭಾಗ. ಉದರ ಭಾಗವನ್ನು ಕೆಳಗಡೆ ಪ್ರತ್ಯೇಕವಾಗಿ ತೋರಿಸಿದೆ. ನಳ್ಳಿ ಪರ್ಯಾಯ ಪದ. ಏಡಿಗಳು ಕಠಿಣ ಚರ್ಮಿಗಳು, ತುಂಡು ಬಾಲದವು. ಸಾಧಾರಣವಾಗಿ ಜಲವಾಸಿಗಳು. ಹಲವು ಜಾತಿಯ ಏಡಿಗಳು ಕಡಲಿನಲ್ಲಿ ವಾಸಿಸುತ್ತವೆ. ಕೆಲವು ಉಷ್ಣ ಮತ್ತು ಸಮಶೀತೋಷ್ಣವಲಯಗಳ ಹೊಳೆ, ತೊರೆ, ನಾಲೆ, ಝರಿ, ಕಾಲುವೆ ಮತ್ತು ನೀರು  ತುಂಬಿದ ಗದ್ದೆಗಳಲ್ಲೂ ವಾಸಿಸುತ್ತವೆ. ಸಾಮಾನ್ಯವಾಗಿ ಬಂಡೆಗಳಿಂದ ಕೂಡಿದ ತೀರ ಮತ್ತು ತಳಪ್ರದೇಶಗಳೇ ಇವುಗಳ ನೆಲೆ. ಬಂಡೆಗಳ ಬಿರುಕು ಮತ್ತು ಬಿಲಗಳೇ ಇವುಗಳ ಬೀಡು. ಇದಲ್ಲದೆ ಕಡಲತೀರದ ಜೌಗುಪ್ರದೇಶ ಮತ್ತು ತೇವಮಯವಾದ ಗದ್ದೆಗಳಲ್ಲೂ ಬಿಲತೋಡಿ ವಾಸಿಸುವ ಏಡಿಗಳಿವೆ. ಇವು ಸಂಜೆ ಮತ್ತು ರಾತ್ರಿಯ ವೇಳೆ ತಮ್ಮ ಆಹಾರವನ್ನು ಹುಡುಕಲು ಹೊರಗೆ ಬರುತ್ತವೆ. ಭೂಮಿಯ ಬಿಲಗಳಲ್ಲಿ ವಾಸಿಸುವ ಏಡಿಗಳೆಲ್ಲವೂ ಜಲಚರ ಏಡಿಗಳಂತೆಯೇ ತಮ್ಮ ಪ್ರಾರಂಭಿಕ ಜೀವನವನ್ನು ನೀರಿನ ಆಸರೆಯಲ್ಲಿಯೇ ಕಳೆಯುತ್ತವೆ.

 ದೇಹ 
ಅಡ್ಡವಾದ ಅಂಡಾಕಾರ ಅಥವಾ ಸರಿಸುಮಾರು ಚೌಕ ಅಥವಾ ತ್ರಿಕೋನಾಕಾರ; ಸ್ವಲ್ಪ ಮಟ್ಟಿಗೆ ಚಪ್ಪಟೆ. ತಲೆ ಮತ್ತು ಎದೆಭಾಗಗಳು ಒಂದುಗೂಡಿ ಶಿರೋವಕ್ಷವಾಗಿ ಮಾರ್ಪಟ್ಟಿದೆ. ಇಡೀ ದೇಹವನ್ನು ಕ್ಯಾರಪೇಸ್ ಎಂಬ ಒಂದು ಗಡುಸಾದ ಚಿಪ್ಪು ಆವರಿಸಿದೆ. ಎದೆಯ ಭಾಗದಲ್ಲಿ ಐದು ಜೊತೆ ಕಾಲುಗಳಿವೆ. ಅವುಗಳ ಪೈಕಿ ಮೊಟ್ಟಮೊದಲಿನ ಜೊತೆಕಾಲುಗಳು ವಿಶೇಷವಾಗಿ ಭಾರಿ ಗಾತ್ರದ್ದಾಗಿದೆ. ತುದಿಭಾಗಗಳು ಚಿಮ್ಮಟದಂತೆ ಮಾರ್ಪಟ್ಟಿವೆ. ಇವುಗಳಿಂದ ಆಹಾರ ಅಥವಾ ಇತರ ವಸ್ತುಗಳನ್ನು ಹಿಡಿಯುವುದು ಸಾಧ್ಯವಾಗುವುದು.  ಆತ್ಮರಕ್ಷಣಾಸಾಧನಗಳಾಗಿಯೂ ಇವುಗಳ ಉಪಯೋಗವಿದೆ. ಏಡಿಗಳ ಓಟದ ದಾರಿಯನ್ನು ಅಡ್ಡಗಟ್ಟಿದರೆ ಅಥವಾ ಒಂದು ಮೂಲೆಗೆ ಅಟ್ಟಿ ನಿಲ್ಲಿಸಿದರೆ ಅವು ತಮ್ಮ ಇಕ್ಕುಳದಂಥ ಪಾದಗಳನ್ನು ಮೇಲೆತ್ತಿ ಭೀತಿಯುಂಟುಮಾಡಲು ಯತ್ನಿಸುತ್ತವೆ. ಒಂದು ವಸ್ತುವನ್ನು ಏಡಿ ಹಿಡಿದುಕೊಂಡಿತೆಂದರೆ ಅದನ್ನು ಬಡಪೆಟ್ಟಿಗೂ ಬಿಡುವುದಿಲ್ಲ. ಉಳಿದ ನಾಲ್ಕು ಜೊತೆ ಪಾದಗಳ ರಚನೆ ಸರಳ. ಅವು ಚಲನೆಯಲ್ಲಿ ನೆರವಾಗುತ್ತವೆ. ಏಡಿಯ ನಡಿಗೆ ಬಲು ವಿಶಿಷ್ಟವಾದದ್ದು. ಇದು ಭೂಮಿಯ ಮೇಲಾಗಲೀ ನೀರಿನ ತಳದಲ್ಲಾಗಲೀ ನಡೆಯುವಾಗ ಈ 
ಚಲನಪಾದಗಳ ತುದಿಯ ಮೇಲೆ ಭಾರ ಹಾಕಿ ಅಡ್ಡಲಾಗಿ ನಡೆಯುತ್ತದೆ. ಕೆಲವು ಜಾತಿಯ ಸಮುದ್ರದ ಏಡಿಗಳ ಕೊನೆಯ ಜೊತೆಕಾಲುಗಳ ತುದಿಭಾಗಗಳು ಅಗಲವಾಗಿ ಹುಟ್ಟಿನಂತೆ ಮಾರ್ಪಟ್ಟು ಈಜುವುದಕ್ಕೆ ನೆರವಾಗುತ್ತವೆ. ಶತ್ರುವಿನೊಡನೆ ಹೋರಾಡುವಾಗ ಏಡಿ ಅದರ ಕಾಲುಗಳನ್ನು ಕಳೆದುಕೊಳ್ಳಬಹುದು. ಆದರೆ ಹೀಗೆ ನಷ್ಟವಾದ ಕಾಲು ಅಥವಾ ಅಂಗ ಪುನಃ ಚಿಗುರುತ್ತದೆ. ಎರಡು ಸಂಯುಕ್ತ ಕಣ್ಣುಗಳು ಚಲನಶೀಲತೊಟ್ಟಿನ ತುದಿಯಲ್ಲಿವೆ. ಮೇಲ್ಚಿಪ್ಪಿನ (ಕ್ಯಾರಪೇಸ್) ಮುಂಭಾಗದ ಗುಳಿಗಳಲ್ಲಿ ಒಳಕ್ಕೆ ಎಳೆದುಕೊಳ್ಳುವಂತೆ ಇವುಗಳ 
ರಚನೆ. ಏಡಿಗೆ ಆರು ಜೊತೆ ಬಾಯಿಯ ಸುತ್ತಾ ಅಂಗುಳದಲ್ಲಿ ಅಳವಡಿಸಿರುವ ಶಿರೋಪಾಂಗಗಳಿವೆ. 

ಉದರ ಭಾಗ ಕ್ಷೀಣಗೊಂಡು ಶಿರೋವಕ್ಷಕ್ಕಿಂತಲೂ ಚಿಕ್ಕದಾಗಿರುವುದಲ್ಲದೆ ಎದೆಯ ಭಾಗದ ತಳದಲ್ಲಿ ಮಡಿಚಿಕೊಂಡಿದೆ. ಉದರ ಮತ್ತು ಕೀಲೇಟ್ ಪಾದಗಳ ಸಹಾಯದಿಂದ ಗಂಡು ಹೆಣ್ಣುಗಳನ್ನು ಸುಲಭವಾಗಿ ಗುರುತಿಸಬಹುದು. ಉದರ ಭಾಗ ಗಂಡಿನಲ್ಲಿ ಹೆಚ್ಚು ಕಿರಿದು ಮತ್ತು ತ್ರಿಕೋನಾಕೃತಿಯದು. ಅದು ಹೆಣ್ಣಿನಲ್ಲಿ ಅಗಲ ಮತ್ತು ದುಂಡಗಿದೆ. ಗಂಡಿನ ಕೀಲೇಟ್ ಪಾದಗಳು ಹೆಣ್ಣಿನದ ಕ್ಕಿಂತ ಹೆಚ್ಚು ದೊಡ್ಡವೂ ಮತ್ತು ಬಲಯುತವೂ ಆಗಿವೆ. ಫಿಡ್ಲರ್ ಏಡಿ ಗಳಲ್ಲಿ ಗಂಡಿನ ಒಂದು ಕೀಲೇಟ್ ಪಾದ ಮತ್ತೊಂದಕ್ಕಿಂತ ದೊಡ್ಡದು. ಹೆಣ್ಣಿನ ಪ್ಲವಪಾದಗಳು ಗಂಡಿನದಕ್ಕಿಂತ ಪುಷ್ಪವಾಗಿ ಬೆಳೆದಿರುತ್ತವೆ. ಸಂತಾನೋತ್ಪತ್ತಿಕಾಲದಲ್ಲಿ ಹೆಣ್ಣು ಏಡಿ ತಾನಿಟ್ಟ ಮೊಟ್ಟೆಗಳೆಲ್ಲವನ್ನು ಒಂದುಗೂಡಿಸಿ ತನ್ನ ಉದರದ ಪ್ಲವಪಾದಗಳಿಗೆ ಅಂಟಿಸಿಕೊಳ್ಳುತ್ತದೆ. ಮೊಟ್ಟೆಯ ಗೊಂಚಲು ದಪ್ಪನಾಗಿರುವುದರಿಂದ ಅದು ದೇಹದಿಂದ ಹೊರಚಾಚುತ್ತದೆ. 

ಏಡಿಗಳು ಸಾಮಾನ್ಯ ವಾಗಿ ಸರ್ವಭಕ್ಷಕಗಳು. ಮಾಂಸಾಹಾರಿ ಮತ್ತು ಸಸ್ಯಾಹಾರಿಗಳೆಂಬ ಎರಡು ಬಗೆಯ ಏಡಿಗಳು ಇವೆ. ಒಮ್ಮೊಮ್ಮೆ ಕೆಲವು ಬಗೆಯ ಏಡಿಗಳು ತಮಗಿಂತಲೂ ಸಣ್ಣದಾದ ಏಡಿಗಳನ್ನು ಹಿಡಿದು ತಿನ್ನುವುದೂ ಉಂಟು. ಅಂತೂ ಅನೇಕ ಏಡಿಗಳು ಕೊಳೆತಿನಿಗಳಾಗಿದ್ದು ಪರಿಸರವನ್ನು ಸ್ವಚ್ಛಗೊಳಿಸುತ್ತವೆ. 

ಏಡಿ ಪರತಂತ್ರಜೀವಿಗಳಲ್ಲ. ಆದರೆ ಆತ್ಮರಕ್ಷಣೆಗಾಗಿ ಹಲವು ಬಗೆಯ ಉಪಾಯಗಳನ್ನು ಅವು ಕೈಗೊಂಡಿರುತ್ತವೆ. ಕೆಲವು ಬಗೆಯ ಏಡಿಗಳಿಗೆ ಪರಿಸರದಲ್ಲಿರುವ ಸಣ್ಣಸಣ್ಣ ಕಲ್ಲುಗಳ ಆಕಾರ, ಗಾತ್ರ ಮತ್ತು ವರ್ಣವಿನ್ಯಾಸಗಳೇ ಇವೆ. ಈ ಕಾರಣದಿಂದ ಅವು ಶತ್ರುವಿನ ಕಣ್ಣಿಗೆ ಸುಲಭವಾಗಿ ಬೀಳುವುದಿಲ್ಲ. ಕೆಲವು ಏಡಿಗಳು ತಮ್ಮ ಪರಿಸರದಲ್ಲಿ ಬೆಳೆಯುವ ಜೊಂಡು ಮತ್ತು ಸ್ಪಂಜು ಪ್ರಾಣಿಗಳನ್ನು ಬೆನ್ನಿನ ಮೇಲೆ ಸಮುದ್ರದ ಅನಿಮೋನನ್ನು ಕೂರಿಸಿಕೊಂಡು ಸಹಜೀವನ ನಡೆಸುವುವು. ಇಂಥ ಸಹಜೀವನದಿಂದ ಏಡಿಗಳಿಗೆ ಸುಲಭವಾಗಿ ಆತ್ಮರಕ್ಷಣೆ ಒದಗುತ್ತದೆ. ಇದರೊಂದಿಗೆ, ಚಲನಸಾಮಥರ್ಯ್‌ವಿಲ್ಲದ ಅನಿಮೋನಿಗೆ ಒಂದೆಡೆಯಿಂದ ಮತ್ತೊಂದೆಡೆಗೆ ಸವಾರಿ ಹೋಗುವ ಅವಕಾಶ ಸಿಗುತ್ತದೆ.

 ಸಂತಾನೋತ್ಪತ್ತಿ 
ಕಾರ್ಸಿನಸ್ ಜಾತಿಯ ಏಡಿಯಲ್ಲಿ ಸಾಕಷ್ಟು ಮಾಹಿತಿಗಳು ದೊರೆತಿವೆ. ಮೊಟ್ಟೆಯಿಟ್ಟ ಎರಡು ವಾರಗಳಾದ ಅನಂತರ ಮೊಟ್ಟೆಯಿಂದ ಮರಿ ಅಥವಾ ಲಾರ್ವಗಳು ಹೊರಬರುತ್ತವೆ. ಇವು ಹೆತ್ತವರನ್ನು ಹೋಲುವುದಿಲ್ಲ. ಬೆಳೆದಂತೆ ತಮ್ಮ ಹೊರಕವಚವನ್ನು ಹಲವಾರು ಬಾರಿ ಕಳಚಿಕೊಂಡು ಕೊನೆಗೆ ಮರಿ ರೂಪಾಂತರಗೊಳ್ಳುತ್ತದೆ. ಇದರಲ್ಲಿ ಎರಡು ಪ್ರಮುಖ ಲಾರ್ವಹಂತಗಳನ್ನು ಕಾಣಬಹುದು. ಮೊಟ್ಟೆಯಿಂದ ಹೊರಬರುವ ಲಾರ್ವದ ಘಟ್ಟಕ್ಕೆ ಜೋಯೆಯ ಎಂದು ಹೆಸರು. ಇದರ ದೇಹದ ಉದ್ದ ಒಂದು ಮಿಲಿಮೀಟರ್. ಇದು ಪಾರದರ್ಶಕ. ಇಂಥವು ಸಾಗರದ ಮೇಲ್ಮೈನಲ್ಲಿ ಈಜುತ್ತ ತಮ್ಮ ಪರಿಸರದ ಸೂಕ್ಷ್ಮಜೀವಿಗಳನ್ನು ತಿಂದು ದೊಡ್ಡದಾಗುತ್ತವೆ. ದೇಹ ದುಂಡಗೆ, ಒಂದು ಜೊತೆ ಸಂಯುಕ್ತ ಕಣ್ಣುಗಳು, ರೋಸ್ಟ್ರಮ್ ಮತ್ತು ಕ್ಯಾರಪೇಸುಗಳಿವೆ. 

4-5 ಖಂಡಗಳಿಂದ ಕೂಡಿದ ಉದರ ಭಾಗ ಅದರ ಬಾಲದಂತಿದೆ. ಎದೆಯ ಭಾಗದಲ್ಲಿ ಮೊದಲ ಎರಡು ಜೊತೆಪಾದಗಳು ಮಾತ್ರ ಇವೆ. ಇದರ ಕವಚ ಒಂದೆರಡು ಬಾರಿ ಕಳಚಿಯಾದ ಮೇಲೆ ಬೆನ್ನಿನ ಮೇಲೆ ಒಂದು ನೀಳವಾದ ಮುಳ್ಳು ರೂಪುಗೊಳ್ಳುತ್ತದೆ. ಜೋ಼ಯೆಯ ಲಾರ್ವ ಪ್ರೌಢಜೀವಿಯಂತಿದ್ದರೂ ಇದರ ಉದರ ಭಾಗ ಶಿರೋವೃಕ್ಷದ ತಳಭಾಗದಲ್ಲಿ ಮಡಿಚಿಕೊಂಡಿರದೆ ಹಿಂದಕ್ಕೆ ಚಾಚಿಕೊಂಡಿದೆ. ಇದಕ್ಕೆ ಈಜಲು ನೆರವಾಗುವ ಉಪಾಂಗಗಳಿವೆ. ಇದು ಕೊನೆಗೆ ನೀರಿನ ತಳಭಾಗಕ್ಕಿಳಿದು ಕವಚವನ್ನು ವಿಸರ್ಜಿಸಿ ಮರಿ ಏಡಿಯಾಗುತ್ತದೆ.  ಇದರ ಗಾತ್ರ ಮೂರು ಮಿಲಿಮೀಟರಿನಷ್ಟು. ಇದು ಬೆಳೆದಂತೆಲ್ಲ ಕಾಲಕಾಲಕ್ಕೆ ತನ್ನ ಗಡುಸಾದ ಹೊರಕವಚವನ್ನು ವಿಸರ್ಜಿಸಿ ಹೊಸದನ್ನು ಪುನಃಪುನಃ ರೂಪಿಸಿಕೊಂಡು ದೊಡ್ಡದಾಗುತ್ತದೆ. ಈ ಪರ್ವಕಾಲದಲ್ಲಿ ಅದರ ಹೊರಕವಚ ಮೃದುವಾಗಿರುತ್ತದೆ; ಅದಕ್ಕೆ ಸ್ಥಿತಿಸ್ಥಾಪಕಶಕ್ತಿ ಇರುತ್ತದೆ. ಇದು ಕ್ರಮೇಣ ಗಟ್ಟಿಯೂ ಗಡಸೂ ಆಗುವುದು.

ಆಹಾರವಾಗಿ ಏಡಿ
ಏಡಿಯ ಮಾಂಸ ಬಲು ರುಚಿಕರ. ಹೀಗಾಗಿ ಏಡಿಯ ಪ್ರಭೇದಗಳನ್ನು ಜನ ಆಹಾರಕ್ಕಾಗಿ ಉಪಯೋಗಿಸುತ್ತಾರೆ. ಇದರ ಮಾಂಸ ಮೀನಿನ ಮಾಂಸದಷ್ಟು ಪುಷ್ಟಿದಾಯಕವಲ್ಲ. ಆದರೆ ಇದರಲ್ಲಿ ಔಷಧದ ಮೌಲ್ಯಗಳಿವೆಯೆಂದು ಪರಿಗಣಿಸಲಾಗಿದೆ. ಭಾರತದ ಹಲವು ಕಡೆ ಏಡಿಮಾಂಸದ ಸಾಂಬಾರು ಗೂರಲು ಕೆಮ್ಮು ಮತ್ತು ಬಹು ಕಾಲದ ಜ್ವರಗಳಿಂದ ನರಳುವವರಿಗೆ ಉಪಶಮನಕಾರಿಯೆಂದು ಜನ ನಂಬುತ್ತಾರೆ. ಕೆಲವು ಏಡಿಗಳ ಮಾಂಸದ ಸಾರು ಶಕ್ತಿವರ್ಧಕ. ಏಡಿಯ ಸುಲಿದ ಕವಚವನ್ನು ಪುಡಿ ಮಾಡಿ ಹಂದಿ ಮತ್ತು ಕೋಳಿಗಳ ತಿನಿಸಿನಲ್ಲಿ 
ಬೆರಸುವುದು ಉಂಟು. ಅದನ್ನು ಗೊಬ್ಬರಕ್ಕಾಗಿ ಉಪಯೋಗಿಸುವುದು ಉಂಟು.

 ಭಾರತದಲ್ಲಿ ಆಹಾರಕ್ಕಾಗಿ ಬಳಸುವ ಏಡಿಗಳು 
 ಷಿಲ್ಲ ಸೆರೇಟ  
ಇದು ಸಮುದ್ರದ ಕೊಲ್ಲಿ, ಖಾರಿ, ನದೀಮುಖಜದ ಜೌಗುಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಇದರ ಕೊನೆಯ ಜೊತೆಕಾಲುಗಳ ತುದಿಭಾಗ ಅಗಲವಾಗಿ ಹುಟ್ಟಿನಂತೆ ಮಾರ್ಪಟ್ಟಿರುವುದರಿಂದ ಇದು ನೀರಿನಲ್ಲಿ ಸುಲಭವಾಗಿ ಈಜಬಲ್ಲದು. ಬಿಲಗಳಲ್ಲಿ ಇದರ ವಾಸ. ಭಾರತದಲ್ಲಿ ಕಂಡುಬರುವ ಏಡಿಗಳಲ್ಲೆಲ್ಲ ಇದು ಬಲು ದೊಡ್ಡದು. ಚಿಕ್ಕ ಸರೋವರದಲ್ಲಿ ಬೆಳೆಯುವ ಷಿಲ್ಲಜಾತಿಯ ಏಡಿಗಳ ಕ್ಯಾರಪೇಸಿನ ಅಡ್ಡ ಅಳತೆ 40 ಸೆಂಮೀ ಗಳಷ್ಟಿರುತ್ತದೆ. ಬೇಸಿಗೆಯಲ್ಲಿ ಇವು 
ಯಥೇಚ್ಚವಾಗಿ ದೊರಕುವುವು. ಆಗ ಇವನ್ನು ದೋಣಿಗಟ್ಟಲೆ ಹಿಡಿಯುತ್ತಾರೆ. 

 ನೆಪ್ಟುನಸ್ ಜಾತಿಯ ಏಡಿಗಳು 
ಇಲ್ಲಿ ಎರಡು ಜೀವಪ್ರಬೇಧಗಳು ಪ್ರಮುಖವಾದುವು; ನೆ. ಪೆಲಾಜಿಕಸ್ ಮತ್ತು ನೆ. ಸ್ಯಾಂಗ್ವಿನೋಲೆಂಟಸ್. ಇವು ಷಿಲ್ಲಿ ಜಾತಿಯ ಏಡಿಗಳಲ್ಲಿ ಈಜು ಜೀವನ ಸಾಗಿಸತಕ್ಕವು. ಬಂಗಾಲ, ಒರಿಸ್ಸ, ದಕ್ಷಿಣ ಭಾರತದ ತೀರ ಪ್ರದೇಶಗಳಲ್ಲಿ ವಾಸಿಸುತ್ತವೆ. ಇವುಗಳ ಕ್ಯಾರಪೇಸ್ ಅಗಲ ಸುಮಾರು 12-14 ಸೆಂಮೀ ನಷ್ಟು.
 ಚೌರಿಬ್ಡಿಸ್ ಕ್ರ್ಯೂಸಿಪೆರ್ 
ದಕ್ಷಿಣಭಾರತದ ತೀರಪ್ರದೇಶದಲ್ಲಿ ಇದರ ವಾಸ. ಈಜುವ ಸಾಮಥರ್ಯ್‌ ಇದೆ. ಕ್ಯಾರಪೇಸಿನ ಮೇಲೆ ವರ್ಣವಿನ್ಯಾಸವಿದೆ.
 ವರುಣ ಲಿಟ್ಟರೇಟ 
ಗಂಗಾನದಿ ಮುಖಜ ಭೂಪ್ರದೇಶಗಳಲ್ಲಿ ಅಸಂಖ್ಯಾತವಾಗಿ ದೊರೆಯುತ್ತದೆ. ಅಲ್ಲದೆ ಕೆರೆ ಕೊಳಗಳ ದಂಡೆಗಳಲ್ಲಿ ಬಿಲ ತೋಡಿಯೂ ವಾಸಿಸುವುದು. ಕೆರೆಯ ನೀರು ಬತ್ತಿಹೋಗುವ ಸಂದರ್ಭಗಳಲ್ಲಿ ತೇವವಿರುವ ಕೆರೆಯಂಗಳದಲ್ಲಿ ಈ ಏಡಿಗಳು ಗುಂಪುಗೂಡುತ್ತವೆ. ಅಲ್ಲಿಯ ಜನರು ಈ ಸಮಯವನ್ನೇ ಕಾದಿದ್ದು ಆಯಾಸವಿಲ್ಲದೆ ಸುಲಭವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಇವನ್ನು ಹಿಡಿಯುತ್ತಾರೆ. 
 ಪಾರಟೆಲ್ಫೂಸ ಸ್ಪೈನಿಜೆರ 
ಕೆರೆ, ತೊರೆ, ಕಾಲುವೆಗಳದಂಡೆಗಳಲ್ಲಿ ಬಿಲಗಳಲ್ಲಿ ವಾಸ. ನೀರಿನಲ್ಲಿ ಹರಿಯಬಲ್ಲುದೇ ವಿನಾ ಈಜಲಾರದು. ಇದರ ಕ್ಯಾರಪೇಸಿನ ಅಡ್ಡಳತೆ 8 ಸೆಂಮೀ ನಷ್ಟಿದೆ.
ಬಿಲಗಳಲ್ಲಿ ಮತ್ತು ಕಲ್ಲಿನ ಪೊಟರೆಗಳಲ್ಲಿ ವಾಸಿಸುವ ಏಡಿಗಳನ್ನು ಮತ್ತು ನೀರಿನಲ್ಲಿ ಈಜುವ ಮತ್ತು ಹರಿದಾಡುವ ಏಡಿಗಳನ್ನು ಹಿಡಿಯುವ ರೀತಿಗಳು ಬೇರೆ ಬೇರೆ. ಒಂದು ಬಿದಿರಿನ ಗಳುವನ್ನು ಬಿಲಗಳಲ್ಲಿಯೋ ಅಥವಾ ಬಿರುಕು ಅಥವಾ ಪೊಟರೆಗಳಲ್ಲಿಯೋ ತುರುಕಿದಾಗ ಭಯಗೊಂಡು ಏಡಿ ತನ್ನ ಹಿಡಿಗಾಲುಗಳಿಂದ ಅದನ್ನು ಬಲವಾಗಿ ಹಿಡಿದುಕೊಳ್ಳುತ್ತದೆ. ಹಾಗೆ ಹಿಡಿದುಕೊಂಡ ಏಡಿಯನ್ನು ಹಾಗೆಯೇ ಹೊರಕ್ಕೆಳೆದು ಹಿಡಿಯುವುದು ಒಂದು ವಿಧಾನ. ಕೆಲವು ಸಂದರ್ಭಗಳಲ್ಲಿ ಗಳು ಅಥವಾ ಕೋಲಿನ ತುದಿಗೆ ಸತ್ತ ಮೀನು ಅಥವಾ ಇತರ ಸಣ್ಣ 
ಪ್ರಾಣಿಯನ್ನು ಕಟ್ಟುವುದೂ ಉಂಟು. ಖಾರಿ, ಕೊಲ್ಲಿಗಳಲ್ಲಿ ಈಜಾಡುವ ಏಡಿಗಳನ್ನು ಹಿಡಿಯುವ ವಿಧಿವಿಧಾನಗಳೇ ಬೇರೆ. ಕಡಲ ಏಡಿಗಳನ್ನು ವೃತ್ತಾಕಾರದ ಬಲೆಗಳನ್ನು ಬೀಸಿ ಹಿಡಿಯುವುದುಂಟು. ಖಾರಿ, ಕೊಲ್ಲಿಯ ದಂಡೆಯಲ್ಲಿ ಒಂದು ಕಂಬವನ್ನು ನೆಟ್ಟು ಮತ್ತು ಅದಕ್ಕೆ ಒಂದು ಹಗ್ಗದ ಕೊನೆಯನ್ನು ಬಿಗಿದು ಮತ್ತೊಂದು ಕೊನೆಯನ್ನು ತಮ್ಮ ದೋಣಿಗೆ ಕಟ್ಟುತ್ತಾರೆ. ಸತ್ತ ಮೀನುಗಳನ್ನು ನೇತಾಡುವ ಹಗ್ಗಗಳ ಸಹಾಯದಿಂದ ಇಳಿಬಿಡುತ್ತಾರೆ. ಇವು ನೀರಿನಲ್ಲಿ ಮುಳುಗಲು ಸಣ್ಣ ಸಣ್ಣ ಕಲ್ಲುಗಳನ್ನು ಮೀನಿನೊಂದಿಗೆ ಬಿಗಿಯುತ್ತಾರೆ. ಏಡಿಗಳು 
ಮೀನುಗಳನ್ನು ತಮ್ಮ ಹಿಡಿಗಾಲುಗಳಿಂದ ಬಲವಾಗಿ ಹಿಡಿದು ಕೆಳಕ್ಕೆ ಜಗ್ಗುತ್ತವೆ. ಹಗ್ಗ ಭಾರವಾಗಿರುವುದನ್ನು ಕಂಡು, ಅದನ್ನು ಮೇಲಕ್ಕೆ ಎತ್ತಿ ಏಡಿಗಳನ್ನು ಸಂಗ್ರಹಿಸುತ್ತಾರೆ.
ಜಪಾನ್ ಮತ್ತು ಅಮೆರಿಕ ದೇಶಗಳಲ್ಲಿ ಏಡಿಯ ಮಾಂಸವನ್ನು ಹದಗೊಳಿಸಿ ಡಬ್ಬಗಳಲ್ಲಿ ತುಂಬುವ ಉದ್ಯಮಗಳು ಬೆಳೆದಿವೆ. ಅಲ್ಲಿ ಮೊದಲು ಏಡಿಗಳನ್ನು 15-20 ನಿಮಿಷಗಳ ಕಾಲ ಕುದಿಯುವ ನೀರಿನಲ್ಲಿ ಅದ್ದಿ ಅನಂತರ ಅವುಗಳ ಹೊರ ಕವಚ ಮತ್ತು ಇತರ ಮೃದುವಾದ ಪಚನಾಂಗ, ಶ್ವಾಸಾಂಗ, ಜನನಾಂಗಗಳನ್ನು ಹೊರತೆಗೆದು ಶುದ್ಧವಾದ ನೀರಿನಿಂದ ಚೆನ್ನಾಗಿ ತೊಳೆಯುತ್ತಾರೆ. ಅನಂತರ ಅವನ್ನು ಶೇ.1 ಉಪ್ಪುನೀರಿನಲ್ಲಿ ತೊಳೆದು ಜಜ್ಜಿ ಶುದ್ದಗೊಳಿಸಿ ಡಬ್ಬಗಳಲ್ಲಿ ತುಂಬಿ ರಕ್ಷಿಸುತ್ತಾರೆ. ಹೀಗೆ ಸಿದ್ಧಗೊಳಿಸಿದ ಕೈಸೊನೆಕ್ಟಸ್ ಫೆಲಾಂಜಿಯಂ ಎಂಬ ಏಡಿಯ ಮಾಂಸ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಸರಾಗಿದೆ.

ಏಡಿಗಳ ಗಾತ್ರ ಸಾಮಾನ್ಯವಾಗಿ ಚಿಕ್ಕದು. ಕೆಲವು ಮಾತ್ರ ದೊಡ್ಡದಾಗಿರುವುದುಂಟು. ಒಂದೆರಡು ಜಾತಿಯ ಏಡಿಗಳು ರಾಕ್ಷಸಾಕಾರದಷ್ಟು ಬೆಳೆದಿರುತ್ತವೆ. ಉದಾಹರಣೆಗೆ ಜಪಾನಿನ ರಾಕ್ಷಸ ಏಡಿಯ ಕ್ಯಾರಪೇಸ್ 30 ಸೆಂಮೀಗಿಂತಲೂ ಹೆಚ್ಚಿನ ವ್ಯಾಸವುಳ್ಳದ್ದು. ಅದರ ಕಾಲುಗಳ ಉದ್ದ 3 ಮೀಗಳಷ್ಟಿದೆ. 

ಬ್ರಾಕಿಯೂರದ ಹತ್ತಿರಸಂಬಂಧಿ ಉಪಗಣವಾದ ಅನೊಮುರದಲ್ಲಿ ಕೆಲವು ಕಠಿಣ ಚರ್ಮಿಗಳನ್ನು ಏಡಿಗಳೆಂದು ರೂಢಿನಾಮವಾಗಿ ಕರೆಯುವುದುಂಟು. ಈ ಗುಂಪಿನ ದಶಪಾದಿಗಳಿಗೂ ಉದರ ಮೊಟಕು. ಅದು ಶಿರೋವಕ್ಷಕ್ಕಿಂತಲೂ ಚಿಕ್ಕದು; ಮತ್ತು ಶಿರೋವಕ್ಷದ ತಳಭಾಗದಲ್ಲಿ ಅದು ಶಾಶ್ವತವಾಗಿ ಮಡಿಚಿಕೊಂಡಿರುತ್ತದೆ. ಈ ಗುಂಪಿನಲ್ಲಿ ಏಡಿಗಳೆಂದು ಕರೆಯಲಾಗುವ ಪ್ರಾಣಿಗಳ ಪೈಕಿ ಸಂನ್ಯಾಸಿ ಏಡಿ ಚಿರ ಪರಿಚಿತ. ಇವು ಸಾಮಾನ್ಯವಾಗಿ ಬಸವನಹುಳು ವರ್ಗದ ಉದರಪಾದಿಗಳ ಬರಿದಾದ ಶಂಖಗಳಲ್ಲಿ ವಾಸಿಸುತ್ತವೆ. ಇವುಗಳ 
ಉದರಭಾಗ ಮೃದುವಾಗಿರುವುದಲ್ಲದೆ ಶಂಖಗಳ ಆಕಾರದಂತೆ ಸುರುಳಿ ಸುತ್ತಿಕೊಂಡಿರುತ್ತವೆ. ಇವುಗಳ ಎಡಭಾಗದ ಉದರದ ಉಪಾಂಗಗಳು ಕ್ಷೀಣಗೊಂಡಿವೆ ಮತ್ತು ಬಲಭಾಗ ನಶಿಸಿ ಹೋಗಿವೆ. ಶಂಖದ ಒಳತುದಿ ಹಿಡಿದುಕೊಳ್ಳಲು ಸಹಾಯಕವಾಗಲು ಅದರ ಕೊನೆಯ ಉದರದ ಉಪಾಂಗಗಳು ಮತ್ತು ಲಾಂಗುಲಾಪಾದಗಳು. ಕೊಕ್ಕೆಯಂತೆ ಮಾರ್ಪಾಟಾಗಿವೆ. ಇದರ ಆಂಟೆನಗಳು ಉದ್ದವಾಗಿವೆ. ಮೊದಲ ಕೀಲೇಟು ಪಾದಗಳಲ್ಲಿ ಅಸಮವಾಗಿ ಬೆಳೆದಿರುವ ಕೀಲೇಟುಗಳಿವೆ. ಕೊನೆಯ ಎರಡು ಜೊತೆ ವಕ್ಷದ ಕಾಲು ಗಳು ಕ್ಷೀಣಗೊಂಡಿವೆ. 

ಸಂನ್ಯಾಸಿ ಏಡಿಗಳು ದೊಡ್ಡವಾ ದಂತೆಲ್ಲ ಹಳೆಯ ಶಂಖವನ್ನು ತ್ಯಜಿಸಿ ಹೊಸ ದೊಡ್ಡ ಶಂಖ ದಲ್ಲಿ ಮನೆ ಮಾಡಿಕೊಳ್ಳುತ್ತವೆ. ಇವು ಸಾಮಾನ್ಯವಾಗಿ ಸಮುದ್ರ ತೀರದ ಖಾರಿಗಳಲ್ಲಿ ಕಂಡು ಬರುತ್ತವೆ. ಈ ಗುಂಪಿನಲ್ಲಿ ಬಿರ್ಗಸ್ ಲ್ಯಾಟ್ರ್ರೊ ಎಂಬ ತೆಂಗಿನಕಾಯಿ ಏಡಿ ಅಥವಾ ದರೋಡೆಕಾರ ಏಡಿಯನ್ನು ಅದು ದೊರಕುವ ಸ್ಥಳದಲ್ಲಿ ವಾಸಿಸುವ ಜನರು ಆಹಾರಕ್ಕಾಗಿ ಉಪಯೋಗಿಸುತ್ತಾರೆ. ಇದೂ ಕೂಡ ಸಂನ್ಯಾಸಿ ಏಡಿಯೇ. ಹಿಂದೂಸಾಗರದ ಸೆಂಟಿನೆಲ್ ದ್ವೀಪ ಮತ್ತು ಬಂಗಾಲಕೊಲ್ಲಿಯ ನಿಕೋಬಾರ್ ದ್ವೀಪಗಳಿಗೆ ಇದು ಸೀಮಿತಗೊಂಡಿದೆ. 
ಇದರ ಕಿವಿರುಗಳು ಕ್ಷೀಣಗೊಂಡಿರುವುದರಿಂದ ಗಾಳಿಯನ್ನು ಉಸಿರಾಡಲು ಕಿವಿರು ಅಂಗುಳದಲ್ಲಿ ರಕ್ತನಾಳಗಳಿಂದ ತುಂಬಿದ ಗೊಂಡೆಗಳಿವೆ. ತೀರಗಳಲ್ಲಿ ಹೆಚ್ಚು ಕಾಲ ವಾಸಿಸಲು ಇವು ಹೊಂದಿಕೊಂಡಿದ್ದರೂ ಆಗಾಗ್ಗೆ ಸಮುದ್ರಕ್ಕೆ ಭೇಟಿಕೊಟ್ಟು ತಮ್ಮ ಕಿವಿರುಗಳನ್ನು ಒದ್ದೆಮಾಡಿಕೊಳ್ಳುತ್ತದೆ. ಅಲ್ಲದೆ ಸಂತಾನೋತ್ಪತ್ತಿಯೂ ಕೂಡ ಸಮುದ್ರದಲ್ಲಿಯೇ ನಡೆಯಬೇಕು. ಏಕೆಂದರೆ ಜೋಯೆಯ ಲಾರ್ವಗಳು ಜಲವಾಸಿಗಳು. ಅವು ಮರದಿಂದ ಬಿದ್ದ ತೆಂಗಿನಕಾಯಿಗಳ ಸಿಪ್ಪೆಯನ್ನು ಬಿಚ್ಚಿ ಅದರಲ್ಲಿರುವ ಕರಟವನ್ನು ಒಡೆದು ತೆಂಗಿನಕಾಯಿಯನ್ನು ತಿನ್ನಬಲ್ಲವು. ಹಲವು ಸಂದರ್ಭಗಳಲ್ಲಿ ತೆಂಗಿನಗಿಡಗಳನ್ನೂ ಹತ್ತಬಲ್ಲವು. ತಮ್ಮ ರಕ್ಷಣೆಗಾಗಿ ಒಡೆದ ಕರಟಗಳಲ್ಲಿ ಮನೆಮಾಡಿಕೊಂಡಿರುವುದು ಇವುಗಳ ಹುಟ್ಟುಗುಣ. ಈ ಕಾರಣಗಳಿಂದಲೇ ಇವಕ್ಕೆ ತೆಂಗಿನ ಏಡಿಗಳೆಂದು ಕರೆಯುವುದೂ ಉಂಟು.               		

(ಬಿ.ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ